ಬಿಂದುಮಾಧವ ಪಾಠಕ ಯ-  
ಬಿಂದುಮಾಧವ ಪಾಠಕ ಜನನ 1935 ಒಂದು ಸಂಗೀತ ಮನೆತನದಲ್ಲಿ. ಮೂಲತಸಃ ಹಾವೇರಿ ಜಿಲ್ಲೆಯ ಬಂಕಾಪುರದ ರೈತ ಕುಟುಂಬ. ಬಿಂದುಮಾಧವರ ಅಜ್ಜ ಹುಬ್ಬಳ್ಳಿಗೆ ಬಂದು ನೆಲೆಸಿದರು. ತಂದೆ ದತ್ತೋಪಂತರು ಒಳ್ಳೆಯ ಬೀನ ಮತ್ತು ಸಿತಾರವಾದಕರು. ಕಕ್ಕ ಸಖಾರಾಮ ಅವರು ಮುರಾದಖಾನ ಬೀನಕಾರರ ಶಿಷ್ಯರಾಗಿದ್ದರು. ದತ್ತೋಪಂತರು ಕೃಷ್ಣಾಜಿ ಪಂತ ಬಾಳಂದೆ ಅವರಿಂದ ಸಂಗೀತ ದೀಕ್ಷೆ ಪಡೆದರು. ನಂತರ ಸುಪ್ರಸಿದ್ಧ ಮುರಾದಖಾನರಲ್ಲಿ ಅಭ್ಯಾಸ ಮಾಡಿದರು.
ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಕಲೆಗಳ ಪೆÇೀಷಕರಾಗಿದ್ದರು. ಹಿಂದುಸ್ತಾನಿ ಸಂಗೀತವೆಂದರೆ ಬಲು ಪ್ರೀತಿ. ಹಿಂದುಸ್ತಾನಿ ಸಂಗೀತ ದಿಗ್ಗಜರಿಗೆಲ್ಲ ಮೈಸೂರಿಗೆ ಆಹ್ವಾನ. ಮಾರ್ಗಮಧ್ಯೆ ಅವರು ಹುಬ್ಬಳ್ಳಿ, ಧಾರವಾಡ, ಕುಂದಗೋಳಗಳಲ್ಲಿ ಕೆಲ ದಿನ ಇರುತ್ತಿದ್ದರು. ಹಾಗೆ ಬರುತ್ತಿದ್ದವರು ಅಬ್ದುಲ್ ಕರೀಮಖಾನ, ಅಬ್ದುಲ್ ವಹೀದಖಾನ, ಮುರಾದಖಾನ ಬೀನಕಾರ ಮೊದಲಾದವರು. ದತ್ತೋಪಂತ ಪಾಠಕ ಅವರ ಮನೆಯೂ ಒಂದು ನಿಲ್ದಾಣವಾಗಿತ್ತು. ಅಂಥ ಸನ್ನಿವೇಶಗಳಲ್ಲಿ ಸಂಗೀತದ ಬಗೆಗೆ ಚರ್ಚೆ ಸಾಗುತ್ತಿತ್ತು. ಇಂಥ ಸಂಗೀತಮಯ ವಾತಾವರಣದಲ್ಲಿ ಬಿಂದುಮಾಧವ ಸಂಗೀತದತ್ತ ಆಕರ್ಷಿತರಾದುದು ಸಹಜ. ಸ್ವಾರಸ್ಯವೆಂದರೆ, ಬಿಂದುಮಾಧವ ಆರಂಭಿಸಿದ್ದು ತಬಲಾ ವಾದನ. ಮೂರು ವರ್ಷದವನಿದ್ದಾಗಲೇ. ಗುರು ಕಲ್ಲಪ್ಪ ಹೂಗಾರ ಭಾರತದ ಪ್ರಥಮ ಸ್ವಾತಂತ್ರ್ಯೋತ್ಸವ. ಆಗಸ್ಟ್ 15, 1947. ಹುಬ್ಬಳ್ಳಿಯಲ್ಲಿ ನಾಲ್ಕೆಡೆ ಕರಗುದರಿ ಅವರ ಕೀರ್ತನ. ತಬಲಾ ಸಾಥಿ ಬಾಲಕ ಬಿಂದುಮಾಧವ ಪಾಠಕ.

ಬಿಂದುಮಾಧವ ಪಾಠಕ ಬೀನ ಮತ್ತು ಸಿತಾರ ನುಡಿಸಲು ಕಲಿಯಲಾರಂಭಿಸಿದ್ದು 1947ರಲ್ಲಿ. ದತ್ತೋಪಂತರಿಗೆ ಮಗ ಡಾಕ್ಟರಾಗಿ ಕೈತುಂಬ ಸಂಪಾದಿಸಬೇಕೆಂಬ ಕನಸು. ತಮ್ಮಂತೆ ಸಂಗೀತಗಾರನಾಗಿ ಕಷ್ಟ ಅನುಭವಿಸುವುದು ಬೇಕಿರಲಿಲ್ಲ. ಆದರೆ, ಮಗ ಹಿಡಿದದ್ದು ಸಂಗೀತದ ಹಾದಿ. ತಂದೆಗೆ ಗೊತ್ತಾಗದಂತೆ ಬಿಂದುಮಾಧವ ಸಂಗೀತ ಕಲಿಯಲಾರಂಭಿಸಿದರು. ಗಂಗೂಬಾಯಿ ಹಾನಗಲ್ಲರ ಪ್ರಥಮ ಗುರು ದತ್ತೋಪಂತ ದೇಸಾಯಿ ಅವರಿಂದ.

1954ರಲ್ಲಿ ಅಂತರಕಾಲೇಜು ಯುವಜನೋತ್ಸವ. ಬಿಂದುಮಾಧವ ಬೀನ ನುಡಿಸಿದರು. ಮಿಂಯಾ ಮಲ್ಹಾರ ರಾಗವನ್ನು. ಗೊತ್ತಿದ್ದುದು ಅದೊಂದೆ. ವಾದ್ಯವನ್ನು ಸರಿಯಾಗಿ ಶೃತಿಗೊಳಿಸಲೂ ಬರುತ್ತಿರಲಿಲ್ಲ. ವಾದ್ಯಸಂಗೀತದಲ್ಲಿ ಪ್ರಥಮ ಸ್ಥಾನ ಬಂತು. ಜೊತೆಗೆ ಅಂತರ ವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಅವಕಾಶ. ಆಯ್ಕೆ ಆದವರ ಹೆಸರು ಪತ್ರಿಕೆಗಳಲ್ಲಿ ಪ್ರಕಟ. ಆವಾಗಲೇ ತಂದೆಗೆ ಗೊತ್ತಾದದ್ದು. ಮಗನನ್ನು ಡಾಕ್ಟರನನ್ನಾಗಿಸುವ ಕನಸು ನುಚ್ಚು ನೂರಾಯಿತು. ನನಗೆ ಗೊತ್ತಿಲ್ಲದಂತೆ ನನ್ನ ವಾದ್ಯಕ್ಕೆ ಕೈ ಹಚ್ಚಿದ್ದೇಕೆ ಎಂದು ಗರ್ಜನೆ. ಕಪಾಳಮೋಕ್ಷ.
ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಅವಕಾಶಕ್ಕೆ ನೀರು ಬಿಟ್ಟಂತೆಯೆ. ಕುಲಪತಿ ಡಾ.ಡಿ.ಸಿ. ಪಾವಟೆ ದತ್ತೋಪಂತರನ್ನು ಮನವೊಲಿಸಿದರು. ಒಂದು ಷರತ್ತಿನೊಂದಿಗೆ ಒಪ್ಪಿಗೆ. ತಾವೂ ಮಗನೊಂದಿಗೆ ದಿಲ್ಲಿಗೆ ಹೋಗಬೇಕು. ತನ್ನ ಮಗ ಏನಾದರೂ ಬಾರಿಸಿ ಮನೆತನದ ಹೆಸರು ಕೆಡಿಸಿಯಾನೆಂಬ ಆತಂಕ.ತಂದೆ, ಮಗ ದಿಲ್ಲಿಗೆ ಪಯಣ. ಅಲ್ಲಿಯೂ ಪ್ರಥಮ ಸ್ಥಾನ. ಮಗ ಇಷ್ಟು ಚನ್ನಾಗಿ ಬಾರಿಸುತ್ತಾನೆ, ನೀವೇಕೆ ಕಲಿಸಬಾರದು ಎಂದು ಹಿತೈಷಿಗಳ ಒತ್ತಾಸೆ. ತಂದೆಯ ಮನ ಕರಗಿತು.

ಸರಿ, ವಿಧ್ಯುಕ್ತ ಗಂಡಾಬಂಧನದ ನಂತರ ಪಾಠ ಆರಂಭ. ದತ್ತೋಪಂತ ಹಿಂದಿರುಗಿ ನೋಡಲಿಲ್ಲ.ಮಗನಿಗೆ ಬೀನ ಮತ್ತು ಸಿತಾರ ನುಡಿಸಲು ಕಲಿಸಲಾರಂಭ. ಅಷ್ಟೆ ಅಲ್ಲ, ವಿದ್ಯಾಭ್ಯಾಸವನ್ನು ರಜಬ ಅಲಿಖಾನರಲ್ಲಿ ಮುಂದುವರಿಸಲು ಮಧ್ಯ ಪ್ರದೇಶದಲ್ಲಿರುವ ದೇವಾಸಕ್ಕೆ ಕಳಿಸಿಕೊಟ್ಟರು. ಕುಮಾರ ಗಂಧರ್ವ ನೆಲೆಸಿದ್ದು ಅಲ್ಲಿಯೆ. ಅಲ್ಲಿಯ ಕಠಿಣ ವಾತಾವರಣ ಸಹಿಸಲಸಾಧ್ಯವಾಗಿತ್ತು. 15 ದಿನಗಳಲ್ಲಿ ಬಿಂದುಮಾಧವ ಮನೆಗೆ ಹೇಳದೆ ಕೇಳದೆ ಓಡಿಬಂದರು. ತಂದೆ ಬೈದು ತಿರುಗಿ ಕಳಿಸಿದರು. ಒಂದೂವರೆ ವರ್ಷ ರಜಬ ಅಲಿಖಾನರ ಮಾರ್ಗದರ್ಶನದಲ್ಲಿ ಪರಿಶ್ರಮ. ಮಿಜರಾಫ ತಂತ್ರ ಮತ್ತು ಬೀನವಾದನದ ಸೂಕ್ಷ್ಮಾಂಶಗಳು ಕರಗತ.
ಬಿಂದುಮಾಧವ ಪಾಠಕರ ಯಶೋಯಾತ್ರೆ ಆರಂಭಗೊಂಡಿತು. 1955. ಆಕಾಶವಾಣಿಯ ಅಖಿಲ ಭಾರತ ಸ್ಪರ್ಧೆಯಲ್ಲಿ ಎರಡನೆ ಬಹುಮಾನ. 1956ರ ಅಂತರ ವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಪುನಃ ವಿಜಯ. ಈ ಬಾರಿ ಸಿತಾರ ನುಡಿಸಿ. 1958ರಲ್ಲಿ ಯುವ ಕಾಂಗ್ರೆಸ್ ಅಧಿವೇಶನದಲ್ಲಿ ಬೀನ ಕಚೇರಿ. 1959ರಲ್ಲಿ ನೆಹರು ನಿವಾಸ ತೀನಮೂರ್ತಿ ಭವನದಲ್ಲಿ ಕಚೇರಿ. 1977ರಲ್ಲಿ ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವದಲ್ಲಿ ಕಚೇರಿ. 1982ರಲ್ಲಿ ಭೋಪಾಲದಲ್ಲಿ ಜರುಗಿದ ವಿರಳ ವಾದ್ಯ ಸಮ್ಮೇಳನದಲ್ಲಿ, ಮೈಸೂರು ದಸರಾ ಉತ್ಸವದಲ್ಲಿ, ಬೆಂಗಳೂರಿನಲ್ಲಿ ಜರುಗಿದ ಸಾರ್ಕ್ ಸಮ್ಮೇಳನದಲ್ಲಿ ಹಾಗೂ ಆಕಾಶವಾಣಿಯಲ್ಲಿ ರಾಷ್ಟ್ರೀಯ ಕಾರ್ಯಕ್ರಮ.

ಧ್ರುಪದ ಶೈಲಿಯ ಬೀನವಾದನದಲ್ಲಿ ನಾಲ್ಕು ಬಾನಿ: ವಾಣಿ, ಘರಾನಾ ಇವೆ, ಗೌರಿಹಾರಿ, ಡಾಗುರ, ಖಂಡಾರಹಾರಿ, ನೌಹಾರ. ಬಿಂದುಮಾಧವ ಪಾಠಕರದು ಗೌರಿಹಾರಿ ಬಾನಿ. ಅದರಲ್ಲಿ ಆಲಾಪಕ್ಕೆ ವಿಪುಲ ಅವಕಾಶ. ಖಂಡಾರಹಾರಿ ಬಾನಿಯಲ್ಲಿ ಲಯಕಾರಿಗೆ ಪ್ರಾಧಾನ್ಯ. ಕಿರಾಣಾ ಘರಾಣಾದ ಪ್ರವರ್ತಕರೂ ಪರಮಶ್ರೇಷ್ಠ ಬೀನವಾದಕರೂ ಆಗಿದ್ದ ಬಂದೆ ಅಲಿಖಾನರು ಧ್ರುಪದ ಮತ್ತು ಖ್ಯಾಲ ಶೈಲಿಗಳನ್ನು ಬೆಸೆದು ಒಂದು ವಿಶಿಷ್ಟ ಬೀನವಾದನ ಶೈಲಿಯನ್ನು ರೂಪಿಸಿದರು. ಸ್ವರದಿಂದ ಸ್ವರಕ್ಕೆ ಬಢತ್, ರಾಗದ ವಿಕಾಸ, ಜೋಡ್, ಝಾಲಾ ಮತ್ತು ಸಾಂಪ್ರದಾಯಿಕ ಗತ್‍ಗಳನ್ನು ಗರ್ಭೀಕರಿಸಿಕೊಂಡಿರುವ ಈ ಶೈಲಿ ಗಾಯಕಿ ಅಂಗ ವಾದ್ಯವಾಗಿರುವ ಬೀನ್‍ಗೆ ಹೇಳಿ ಮಾಡಿಸಿದಂತಿದೆ. ಬಿಂದುಮಾಧವರ ವೈಶಿಷ್ಟ್ಯವೆಂದರೆ, ಪಖಾವಜ ಬದಲು ತಬಲಾ ಸಾಥ ರೂಢಿಸಿಕೊಂಡಿರುವುದು. ಈ ಪ್ರದೇಶದಲ್ಲಿ ಪಖಾವಜ ಬಾರಿಸುವವರು ಇಲ್ಲದಿರುವುದರಿಂದ ಅದು ಅನಿವಾರ್ಯವೂ ಹೌದು.

ಬಿಂದುಮಾಧವ ಪಾಠಕ ವಿದ್ವಾಂಸರು ಕೂಡ. 1963ರಲ್ಲಿ ಸಿರಸಿಯ ಎಂ.ಎಂ. ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕ. 1965ರಲ್ಲಿ ಹಿಂದಿ ಎಂ.ಎ ಪಾಸಾದರು. 1966ರಲ್ಲಿ ಎಂ. ಮ್ಯೂಜಿಕ್. ಫ್ರೆಂಚ್ ಸರ್ಟಿಪಿsಕೇಟ್ ಕೋರ್ಸ್. ಇಷ್ಟಕ್ಕೆ ತೃಪ್ತಿಪಡದೆ 1972ರಲ್ಲಿ ಇಂಗ್ಲಿಷ ವಿಷಯ ಆಯ್ದುಕೊಂಡು ಎಂ.ಎ.

1979ರಲ್ಲಿ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ವಿಭಾಗ ಸೇರಿ 1995ರಲ್ಲಿ ಮುಖ್ಯಸ್ಥರಾಗಿ. ಏತನ್ಮಧ್ಯೆ 1983ರಲ್ಲಿ ಹಿಂದೀ ಕೆ ಭಕ್ತಿಯುಗೀನ ಕವಿಯೋಂ ಕೆ ಸಂಗೀತ ಕಿ ಪರಿಕಲ್ಪನಾ ಎಂಬ ವಿಷಯದಲ್ಲಿ ಪ್ರಬಂಧ ಸಲ್ಲಿಸಿ ಪಿ.ಎಚ್‍ಡಿ. ಪ್ರಪ್ತಿ. ಸಂಗೀತದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಥಮ ಪಿ.ಎಚ್‍ಡಿ. ಡಾ. ಪಾಠಕ ಅವರ ಮಾರ್ಗದರ್ಶನದಲ್ಲಿ ಐವರು ಪಿ.ಎಚ್‍ಡಿ. ಪಡೆದಿದ್ದಾರೆ. ಅವರು ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್, ಫ್ರೆಂಚ್, ಕೊಂಕಣಿ ಚನ್ನಾಗಿ ಬಲ್ಲವರು. ಕನ್ನಡದಲ್ಲಿ ಭಾರತೀಯ ಸಂಗೀತ ಚರಿತ್ರೆ ಗ್ರಂಥ ಬರೆದಿರುವರು. ಮತ್ತು ಹಲವಾರು ಲೇಖನ ಬರೆದಿರುವರು.

ಡಾ. ಬಿಂದುಮಾಧವ ಪಾಠಕರಿಗೆ 1991ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ಬಂದಿದೆ. 1994ರಲ್ಲಿ ಕರ್ನಾಟಕ ಸರಕಾರದ ಅತ್ಯುನ್ನತ ಸಂಗೀತ ಪ್ರಶಸ್ತಿ. ಕನಕಪುರಂದರ ಪ್ರಶಸ್ತಿ.           *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ